ಬಿeóÁಟೀಯನ್ ಸಾಮ್ರಾಜ್ಯ
306-1453. ಮೆಡಿಟರೇನಿಯನ್ ಸಮುದ್ರ ಮತ್ತು ಕಪ್ಪು ಸಮುದ್ರ ತೀರಗಳಲ್ಲಿ ಹಾಗೂ ಯೂರೊಪಿನ ದಕ್ಷಿಣ ಮತ್ತು ಆಗ್ನೇಯ ಪ್ರದೇಶ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಹರಡಿಕೊಂಡಿದ್ದ ಒಂದು ಚಕ್ರಾಧಿಪತ್ಯ. ಇದನ್ನು ಪೂರ್ವ ರೋಮನ್ ಸಾಮ್ರಾಜ್ಯವೆಂದೂ ಕರೆಯುವುದುಂಟು. ಈ ಸಾಮ್ರಾಜ್ಯದ ರಾಜಧಾನಿ ಬಾಸ್ಛೊರಸ್ ಜಲಸಂಧಿಯ ಐರೋಪ್ಯ ದಂಡೆಯ ಮೇಲಿದ್ದ ಬಿಜಾನ್‍ಟೀಯಮ್. ಒಂದನೆಯ, ಕಾನ್‍ಸ್ಟಂಟೈನ್ ಮಹಾಶಯ ಈ ನಗರವನ್ನು ರೋಮ್ ಚಕ್ರಾಧಿಪತ್ಯದ ರಾಜಧಾನಿಯಾಗಿ ಮಾಡಿಕೊಂಡು (330) ಕಾನ್‍ಸ್ಟಾಂಟಿನೋಪಲ್ ಎಂದು ಕರೆದ. ಮುಂದೆ ಟರ್ಕರ ಆಡಳಿತಕ್ಕೆ ಒಳಪಟ್ಟು ಈ ನಗರ ಇಸ್ತಾನ್ ಬುಲ್ ಎಂದು ಪ್ರಸಿದ್ಧವಾಯಿತು.

ಸುಮಾರು 1200 ವರ್ಷಗಳ ಕಾಲ ಬಿಜಾóನ್‍ಟೀಯನ್ ಸಾಮ್ರಾಜ್ಯ ಉತ್ತರ ಯೂರೊಪ್ ಮತ್ತು ಏಷ್ಯದ ಕೆಲವು ಭಾಗಗಳಿಂದ ಬರುತ್ತಿದ್ದ ಅನಾಗರಿಕ ಜನಾಂಗದವರ ದಾಳಿಯಿಂದ ಪಶ್ಚಿಮ ಯೂರೊಪ್ ಪ್ರದೇಶವನ್ನು ರಕ್ಷಿಸುವುದರ ಜೊತೆಗೆ ಪ್ರಾಚೀನ ಗ್ರೀಸಿನ ಮಹಾಕಾವ್ಯ ಮತ್ತು ಗ್ರಂಥಗಳನ್ನೂ ಸಂರಕ್ಷಿಸಿತೆನ್ನಬಹುದು. ಇದೇ ಮುಂದೆ ಪುನರುಜ್ಜೀವನ ಮತ್ತು ಆಧುನಿಕ ನಾಗರಿಕತೆಯ ಉಗಮಕ್ಕೆ ಕಾರಣವಾಯಿತು. ಬಿಜಾóನ್‍ಟೀಯನ್ ನಗರ ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ ಮಾರ್ಗವನ್ನು ನಿಯಂತ್ರಿಸುವ ಕೇಂದ್ರ ಸ್ಥಳವಾಗಿತ್ತು. ಯೂರೋಪ್ ಮತ್ತು ಏಷ್ಯ ಖಂಡಗಳ ಹೆದ್ದಾರಿಗಳು ಅಲ್ಲಿ ಸಂಧಿಸುತ್ತಿದ್ದುವು. ಮಧ್ಯಕಾಲೀನ ಪ್ರಪಂಚದ ಸಮಸ್ತ ಶ್ರೀಮಂತ ವ್ಯಾಪಾರವೆಲ್ಲ ಈ ನಗರದ ಮೂಲಕ ನಡೆಯುತ್ತಿತ್ತು. ಈ ನೈಸರ್ಗಿಕ ಅನುಕೂಲತೆಗಳ ಜೊತೆಗೆ ಬಿಜಾóನ್ ಟೀಯನ್ ಸಾಮ್ರಾಜ್ಯದ ಬಲಿಷ್ಟ ಮಿಲಿಟರಿ ಮತ್ತು ನೌಕಾಶಕ್ತಿಗಳು ಅದರ ಪ್ರತಿಷ್ಠೆಯನ್ನು ಹೆಚ್ಚಿಸಿದುವು. ಚಕ್ರವರ್ತಿಗೆ ಸಾಮಂತರು ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ಆಳಿದ ಚಕ್ರವರ್ತಿಗಳು ರಾಜತಾಂತ್ರಿಕ ನಿಪುಣರಾಗಿದ್ದು, ಮಿತ್ರರನ್ನು ಗಳಿಸಿಕೊಳ್ಳುವುದರಲ್ಲಿ ಪ್ರವೀಣರಾಗಿದ್ದರು. ಅದೇ ರೀತಿ ಶತ್ರುಗಳನ್ನು ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ ಚತುರತೆಯೂ ಅವರಲ್ಲಿದ್ದಿತು. ಈ ವಿದೇಶಾಂಗ ನೀತಿಯೇ ಅಂದಿನ ಅವಶ್ಯಕತೆ ರೋಮನ್ ರಾಜಕೀಯ ಸಿದ್ಧಾಂತ ಮತ್ತು ಗ್ರೀಕ್ ಸಂಪ್ರದಾಯ ಚರ್ಚ್‍ಗಳ ನಡುವಣ ಮಿಶ್ರ ಪ್ರತಿಕ್ರಿಯೆ ಈ ಸಾಮ್ರಾಜ್ಯಕ್ಕೆ ಒಂದು ಬಗೆಯ ಸ್ವರೂಪ ಕೊಟ್ಟಿತು. ಈ ಸಾಮ್ರಾಜ್ಯಕ್ಕೆ, ಅನೂಚಾನವಾದ ಸಂಸ್ಕøತಿಯ ಹಿನ್ನೆಲೆಯಿದ್ದಿತು.

ಕಾನ್‍ಸ್ಟಂಟೈನನ ಅಧಿಕಾರ (306-337) ಕೇಂದ್ರೀಕೃತ ಮತ್ತು ನಿರಂಕುಶ ಆಡಳಿತವಾಗಿತ್ತು. 313ರಲ್ಲಿ ಈತ ಕ್ರೈಸ್ತಧರ್ಮ ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಿದ. ರಾಜಧಾನಿಯನ್ನು ರೋಮ್ ನಗರದಿಂದ ಬಿಜಾóನ್‍ಟೀನ್ ನಗರಕ್ಕೆ ವರ್ಗಾಯಿಸಿ ಅದಕ್ಕೆ ಕಾನ್‍ಸ್ಟಾಂಟಿನೋಪಲ್ ಎಂದು ಹೆಸರಿಟ್ಟ. 312 ರಲ್ಲಿ ನಡೆದ ಮಿಲ್ ವಿಯನ್ ಬ್ರಿಜ್ಜ್ ಕದನದಲ್ಲಿ, ಮಾಕ್ಸೆನ್‍ಟಿಯಸ್‍ನ ಮೇಲೆ ಅದ್ಭುತ ಜಯ ಗಳಿಸಿದ. ಇದಕ್ಕೆ ಕಾರಣ ಕ್ರಿಸ್ತನ ಶಿಲುಬೆ ಸಂಕೇತವನ್ನು ಬಳಸಿದ್ದು ಎಂಬ ನಂಬಿಕೆಯಿದೆ. ಅವನು ಸ್ಥಾಪಿಸಿದ ಕ್ರಿಶ್ಚಿಯನ್ ಸಾಮ್ರಾಜ್ಯ 1453ರ ತನಕವೂ ಉಳಿದುಕೊಂಡು ಬಂದಿತು. ಚಕ್ರವರ್ತಿ ದೇವರಿಂದ ನೇಮಕನಾದವನು ಮತ್ತು ಅವನು ದೇವರ ಪ್ರತಿನಿಧಿ ಎಂಬ ಭಾವನೆಯಿದ್ದಿತು. ಅವನು ರಾಜ್ಯದ ಆಧಾರ, ಸಾಮ್ರಾಜ್ಯದ ರಕ್ಷಣಾ ಜವಾಬ್ದಾರಿ ಹೊಂದಿರುವ ವ್ಯಕ್ತಿ, ಪ್ರಜೆಗಳ ಯೋಗಕ್ಷೇಮ, ಅಭಿವೃದ್ಧಿ ಮತ್ತು ಚರ್ಚಿನಲ್ಲಿ ಮತ ಐಕ್ಯಮತ ಅವನ ಕಾರ್ಯವೆಂಬ ಭಾವನೆಯಿತ್ತು. ಕ್ರೈಸ್ತ ಧರ್ಮದ ತತ್ತ್ವಗಳನ್ನು ಪರಿಶುದ್ಧವಾಗಿ ಕಾಪಾಡಿ ಕೊಂಡು ಬರುವುದು ಚಕ್ರವರ್ತಿಯ ಹೊಣೆ ಎಂಬ ಆಭಿಪ್ರಾಯವೂ ಇತ್ತು. ಕಾನ್‍ಸ್ಟಂಟೈನ್ ಸುಮಾರು 325ರಲ್ಲಿ ನೈಸೀಯ ಎಂಬ ಪಟ್ಟಣದಲ್ಲಿ ಧಾರ್ಮಿಕ ಮಹಾಸಭೆ ಸೇರಿಸಿದ್ದು ಅಲ್ಲಿ ಅವನ ಇಚ್ಛೆಗನುಗುಣವಾಗಿ ಅರಿಯನ್ನರ ಧರ್ಮವನ್ನು ಹೀಯಾಳಿಸಿ, ಕ್ರಿಸ್ತ ದೇವರು ಎಂಬ ಭಾವನೆಯನ್ನು ಪ್ರತಿಪಾದಿಸಲಾಯಿತು.

ಕಾನ್‍ಸ್ಟಂಟೈನ ಚಕ್ರವರ್ತಿಯ ಮಕ್ಕಳೂ ಉತ್ತರಾಧಿಕಾರಿಗಳೂ (337-361) ಕ್ರೈಸ್ತ ಮತಾವಲಂಬಿಗಳಾದಾಗ್ಯೂ, ಅವನ ತಮ್ಮನ ಮಗ ಜ್ಯೂಲಿಯನ್‍ಗೆ (361-363) ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇರಲಿಲ್ಲ. ಈತ ಮುಂದೆ ಸಾಮ್ರಾಜ್ಯಕ್ಕೆ ಅಪಾರ ನಷ್ಟ ಉಂಟುಮಾಡಿದ. ಗಾತ್ ಮತ್ತು ಹೂಣರು ಏಡ್ರಿಯಾ ನೋಪಲ್ ಬಳಿ ಯುದ್ಧ ಮಾಡಿ ಚಕ್ರವರ್ತಿ ವಾಲೆನ್ಸನನ್ನು (364-378) ಕೊಂದು ಹಾಕಿದರು. ಮುಂದಿನ ಚಕ್ರವರ್ತಿ ತಿಯೋಡೋಸಿಯಸ್ (379-395) ಗಾತರನ್ನು ಸಮಾಧಾನ ಮಾಡಿ ಅವರು ಡಾನ್ಯೂಬ್ ನದಿಯ ದಕ್ಷಿಣ ಭಾಗದಲ್ಲಿ ನಿಲ್ಲುವಂತೆ ಮಾಡಿದ. ಆದರೂ ಗಾತರ ನೆಲೆಗಳು ಚಕ್ರಾಧಿಪತ್ಯದ ಗಡಿಯೊಳಗೇ ಇದ್ದುವು. ಕ್ರೈಸ್ತ ಧರ್ಮವನ್ನಲ್ಲದೆ ಇತರ ಯಾವುದೇ ಧರ್ಮವನ್ನು ಅನುಸರಿಸಬಾರದೆಂದು ಆಜ್ಞೆ ಹೊರಡಿಸಿದವರಲ್ಲಿ ತಿಯೋಡೋನಿಯಸ್ ಮೊದಲಿಗ, ಕಾನ್ ಸ್ಟಾಂಟಿನೋಪಲ್ ನಗರದಲ್ಲಿ ಎರಡನೆಯ ಧಾರ್ಮಿಕ ಮಹಾಸಭೆಯನ್ನು 381ರಲ್ಲಿ ಸೇರಿಸಿ ಎರಿಯಸ್ ವಾದವನ್ನು ಇತ್ಯರ್ಥ ಮಾಡಿಸಿದ. ಇವನ ಮೊಮ್ಮಗ ಎರಡನೆಯ ತಿಯೋಡೋಸಿಯಸ್ (408-450) ಮೂರನೆಯ ಧಾರ್ಮಿಕ ಮಹಾಸಭೆಯನ್ನು ಇಫೇಸಸ್ ನಗರದಲ್ಲಿ 431ರಲ್ಲಿ ಸೇರಿಸಿದ. ಇವನು ಕಾನ್ ಸ್ಟಾಂಟಿನೋಪಲ್ ವಿಶ್ವವಿದ್ಯಾಲಯವನ್ನು 425ರಲ್ಲಿ ಸ್ಥಾಪಿಸಿದ. ತಿಯೋಡೋನಿಯಸ್ ಕೋಡ್ ಎಂಬ ಕಾನೂನು ಸಂಹಿತೆಯನ್ನು 438ರಲ್ಲಿ ಪ್ರಕಟಿಸಿದ. ಕೋಟೆಕೊತ್ತಲಗಳನ್ನು ನಿರ್ಮಿಸಿ ರಾಜಧಾನಿಯನ್ನು ಭದ್ರ ಗೊಳಿಸಿದ. 450ರಲ್ಲಿ ಎರಡನೆಯ ತಿಯೋಡೋನಿಯಸ್‍ನ ತಂಗಿ ಪುಲ್ ಚರಿಯಳು ಮಾರ್ಸಿಯಾನ್‍ನನ್ನು ಮದುವೆಯಾದಳು. ಮಾರ್ಸಿಯಾನ್ (450-457) ಆಳಿದ ಕಾಲದಲ್ಲಿ 4ನೆಯ ಧಾರ್ಮಿಕ ಮಹಾಸಭೆ 451ರಲ್ಲಿ ಷಾಲ್ ಸಿಡಾನ್ ನಗರದಲ್ಲಿ ನಡೆಯಿತು. ಕ್ರಿಸ್ತ ದೇವಾಂಶಸಂಭೂತ ಎಂಬುದನ್ನು ಮತ್ತೆ ಇಲ್ಲಿ ಪ್ರತಿಪಾದಿಸಲಾಯಿತು. ಈ ತೀರ್ಮಾನದಿಂದ ಮನಾಫಿಸೈಟ್ಸ್ ಪಂಥದವರಿಗೆ ಕೋಪ ಉಂಟಾಯಿತು. ಅವರು ಬಿಜಾóನ್‍ಟೀನ್ ರಾಜ್ಯದ ವಿರೋಧಿಗಳಾದರು. ಆದ್ದರಿಂದ ಅವರು ಏಳನೆಯ ಶತಮಾನದಲ್ಲಿ ಸಾಮ್ರಾಜ್ಯದ ಭಾಗವಾಗಿದ್ದ ಸಿರಿಯ ಮತ್ತು ಈಜಿಪ್ಟ್‍ಗಳ ಮೇಲೆ ಅರಬ್ಬರು ಮತ್ತು ಪರ್ಷಿಯನ್ನರು ದಂಡೆತ್ತಿ ಬಂದಾಗ ಅವರನ್ನು ತಡೆಯದೆ ತಟಸ್ಥ ಧೋರಣೆ ಅನುಸರಿಸಿದರು. ಷಾಲ್‍ಸಿಡಾನ್‍ನ 28ನೆಯ ಅಧಿನಿಯಮದ ಪ್ರಕಾರ, ಕಾನ್‍ಸ್ಟಾಂಟಿನೋಪಲ್ ಚರ್ಚು ಸೌಲಭ್ಯಗಳ ವಿಷಯದಲ್ಲಿ ರೋಮಿನ ಚರ್ಚಿಗೆ ಸರಿಸಮಾನವಾಗಿದ್ದರೂ ಅಂತಸ್ಥಿನಲ್ಲಿ ಎರಡನೆಯದೆಂದು ತೀರ್ಮಾನವಾಯಿತು. ಒಂದನೆಯ ಪೋಪ್ ಲಿಯೋ (440-461) ಇದನ್ನು ತೀವ್ರವಾಗಿ ವಿರೋಧಿಸಿದ. ಆದರೆ ಬಿಜಾóನ್‍ಟೀನ್ ಈ ತತ್ತ್ವವನ್ನು ಬಿಟ್ಟುಕೊಡಲಿಲ್ಲ.
ಮನಾಫಿಸೈಟ್ಸ್ ಪಂಥದ ಅನುಯಾಯಿಯಾಗಿದ್ದ ಮೊದಲನೆಯ ಅನಸ್ತಾಸಿಯಸ್ ಚಕ್ರವರ್ತಿ (491-518) ಸಾಮ್ರಾಜ್ಯದ ಬೊಕ್ಕಸದಲ್ಲಿ 32,000 ಪೌಂಡ್ ಚಿನ್ನದ ಹೆಚ್ಚಿನ ನಿಧಿಯಿದ್ದಿತಂತೆ. ಈ ನಿಧಿಯನ್ನು ಮೊದಲನೆಯ ಜಸ್ತಿನಿಯಸ್ ಚಕ್ರವರ್ತಿ ಸಂಪೂರ್ಣವಾಗಿ ಕರಗಿಸಿದ. ಈತ (527-565) ಹಿಂದೆ ವೈಭವದ ಕಾಲದಲ್ಲಿ ಬಿಜಾóನ್‍ಟೀಯನ್ ಸಾಮ್ರಾಜ್ಯದ ಗಡಿಯವರಿಗೂ ಮತ್ತೆ ರಾಜ್ಯ ವಿಸ್ತರಿಸಲು ದೈವಾಜ್ಞೆಯಾಗಿದೆ ಎಂದು ನಂಬಿದ್ದ. ಬೆಲಿಸಾರಿಯಸ್ ಮುಂತಾದ ಪ್ರಬಲ ಸೇನಾನಿಗಳ ನೆರವಿನಿಂದ ಆಫ್ರಿಕವನ್ನು ಗೆದ್ದ (533-548). ವಂಡಾಲ್ ಜನಾಂಗದವರಿಂದ ಬಾಲರಿಕ್ ದ್ವೀಪಗಳನ್ನೂ (533) ಅಸ್ಟ್ರಾಗೋತ್ ಎಂಬ ಅನಾಗರಿಕ ಜನಾಂಗದವರಿಂದ ಇಟಲಿಯನ್ನೂ (535-554) ವಿಸಿಗಾತ್ ಜನಾಂಗದವರಿಂದ ದಕ್ಷಿಣ ಸ್ಪೇನಿನ ಒಂದು ಭಾಗವನ್ನೂ (554) ಆಕ್ರಮಿಸಿಕೊಂಡ. ಪರ್ಷಿಯನ್ನರಿಗೆ ಕಪ್ಪ ಕಾಣಿಕೆ ಸಲ್ಲಿಸುವುದರ ಮೂಲಕ, ಸಾಮ್ರಾಜ್ಯದ ಪೂರ್ವಭಾಗವನ್ನು ಉಳಿಸಿಕೊಂಡು ಬರಲು ಯತ್ನಿಸಿ ವಿಫಲನಾದ. ಆದರೆ ಸ್ಲಾವಿಕ್ ಬುಡಕಟ್ಟು ಜನರ ಆಕ್ರಮಣ ತಡೆಯಲು ಶಕ್ತನಾಗಲಿಲ್ಲ. ಅವರು ಕಾನ್‍ಸ್ಟಾಂಟಿನೋಪಲ್ ನಗರದ ಸುತ್ತ ಮುತ್ತಲಿನ ಪ್ರದೇಶದವರೆಗೂ ನುಗ್ಗಿ ಬಂದರು. ಬಾಲ್ಕನ್ ಪರ್ಯಾಯದ್ವೀಪ ಪ್ರದೇಶದಲ್ಲಿ ಸ್ಲಾಮಿಕ್ ಜನಾಂಗದವರು ಅನೇಕ ಖಾಯಂ ಠಾಣ್ಯಗಳನ್ನು ವಸತಿಗಳನ್ನೂ ಸ್ಥಾಪಿಸಿಕೊಂಡರು. ಆದಾಗ್ಯೂ, ಇವನ ಆಳ್ವಿಕೆಯ ಕಾಲದಲ್ಲಿ ಬಿಜಾóನ್‍ಟೀನ್ ಸಾಮ್ರಾಜ್ಯದ ಎಲ್ಲೆ ಅದರ ಗರಿಷ್ಠ ಮಿತಿಯನ್ನು ಮುಟ್ಟಿತು. ಸಾಮ್ರಾಜ್ಯ ಜಿಬ್ರಾಲ್ಟರ್ ಜಲಸಂಧಿಯಿಂದ ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಯವರೆಗೂ ಹಬ್ಬಿತು. ರೋಮನ್ ಕಾನೂನುಗಳನ್ನು ಕ್ರೊಡೀಕರಿಸಿದುದು ಈ ಚಕ್ರವರ್ತಿಯ ಮಹತ್ತರ ಸಾಧನೆ. ಇದನ್ನು ಕಾರ್ಪಸ್ ಜ್ಯೂರಿಸ್ ಸಿವಿಲಸ್ ಎಂದು ಕರೆಯುತ್ತಾರೆ. ಅದು ಇಂದಿಗೂ ಯೂರೊಪ್ ಖಂಡ ಲ್ಯಾಟಿನ್ ಅಮೆರಿಕ ಮತ್ತು ಲೂಸಿಯಾನ ಪ್ರಾಂತ್ಯದ ಕಾನೂನು ವ್ಯವಸ್ಥೆಗೆ ಅಡಿಪಾಯವಾಗಿದೆ. ಇವನು ಸಾಹಿತ್ಯ ಮತ್ತು ಕಲೆಗೆ ಪ್ರೋತ್ಸಾಹ ನೀಡಿದ. ಅನೇಕ ಕೋಟೆ ಕೊತ್ತಲಗಳನ್ನು ಕಟ್ಟಿಸಿದ. ಸುಂದರ ಸ್ಮಾರಕಗಳು ಜಸ್ತಿನಿಯನ್ನನ ಕಾಲದಲ್ಲಿ ನಿರ್ಮಿತವಾದುವು. ಅವುಗಳ ಪೈಕಿ ಹೋಲಿ ವಿಸ್ಡಮ್ ಚರ್ಚ್ ಮುಖ್ಯವಾದ್ದು. ಇದು ಪ್ರಪಂಚದ ನಾಲ್ಕನೆಯ ದೊಡ್ಡ ಚರ್ಚಾಗಿದ್ದು ಮಧ್ಯಕಾಲೀನ ಯುಗದ ವೈಭವ ಪೂರ್ಣವಾದ ಸ್ಮಾರಕಗಳಲ್ಲಿ ಒಂದೆನಿಸಿದೆ. ಜಸ್ತೀನಿಯನ್ ಬುದ್ಧಿವಂತ ಧಾರ್ಮಿಕ ಪಂಡಿತ. 553ರಲ್ಲಿ ಕಾನ್‍ಸ್ಟಾಂಟಿನೋಪಲ್ ನಗರದಲ್ಲಿ ನಡೆದ ಐದನೆಯ ಧಾರ್ಮಿಕ ಮಹಾಸಭೆಯಲ್ಲಿ ಚರ್ಚಿನ ಮತ್ತು ರಾಜ್ಯದ ಮುಖ್ಯಸ್ಥನಾಗಿ, ಚರ್ಚಿನ ಪುರೋಹಿತ ವರ್ಗ ಇವನ ಅಭಿಪ್ರಾಯಕ್ಕೆ ಮಣಿಯುವಂತೆ ಮಾಡಿದ.
ಜಸ್ತೀನಿಯನ್ನನ ರಾಜ್ಯ ವಿಸ್ತûರಣೆ ಬಲುಕಾಲ ಉಳಿಯಲಿಲ್ಲ. 580ರ ವೇಳೆಗೆ ಲೋಂಬಾರ್ಡ್‍ರು ಇಟಲಿ ಪರ್ಯಾಯ ದ್ವೀಪದ ಅರ್ಧದಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದರು. ಆದರೆ ಚಕ್ರವರ್ತಿ ಮಾರಿಷಸ್ (582-602) ಆರ್ಮೀನಿಯದ ಹೆಚ್ಚಿನ ಭಾಗವನ್ನು ಪರ್ಷಿಯದಿಂದ ರಾಜತಂತ್ರದ ಮೂಲಕ 591ರಲ್ಲಿ ಗೆದ್ದುಕೊಂಡ ಕಾರ್ಥೆಜ್, ಆಫ್ರಿಕ, ರವೆನ್ನ, ಇಟಲಿಗಳಲ್ಲಿ ಬಿಜಾóನ್‍ಟಿಯನ್ ಸರ್ಕಾರದ ಕೇಂದ್ರಗಳನ್ನು ಸ್ಥಾಪಿಸಿದ. ಅಲ್ಲಿಯ ಗೌರ್ನರುಗಳಿಗೆ ಮಿಲಿಟರಿ ಮತ್ತು ನಾಗರಿಕ ಆಡಳಿತಗಳ ಸಂಪೂರ್ಣ ಅಧಿಕಾರ ನೀಡಿದ. ಈ ರೀತಿಯಾಗಿ ಮೊದಲನೆ ಕಾನ್‍ಸ್ಟಂಟೈನ್ ಕಾಲದ ಅಧಿಕಾರ ವಿಭಜನೆಯನ್ನು ರದ್ದುಗೊಳಿಸಿದ. ಫೋಕಾಸ್‍ನ (602-610) ಆಳ್ವಿಕೆಯ ಕಾಲ ಗೊಂದಲಮಯವಾಗಿತ್ತು. ಆ ಪರಿಸ್ಥಿತಿಯನ್ನು ಹೆರಾಕ್ಲಿಯಸ್ (610-641) ಸುಧಾರಿಸಿ ಸಾಮ್ರಾಜ್ಯ ಅನೇಕ ಯುದ್ಧಗಳಲ್ಲಿ ಜಯಗಳಿಸಿದ. 626ರಲ್ಲಿ ಅವರ್ ಜನಾಂಗದವರ ದಾಳಿಯನ್ನು ತಪ್ಪಿಸಿದ್ದಲ್ಲದೆ ಪೂರ್ವಗಡಿಯಲ್ಲಿ ಸೈನಿಕ ಠಾಣ್ಯಗಳನ್ನು ಸ್ಥಾಪಿಸಿ ಸಾಮ್ರಾಜ್ಯದ ಪೂರ್ವಗಡಿ ಜಸ್ತೀನಿಯನ್ನನ ಕಾಲದಲ್ಲಿದ್ದಂತೆ ಪುನಃ ವ್ಯವಸ್ಥೆ ಮಾಡಿದ ಕೂಡ. ಪ್ರಾಂತಗಳ ಆಡಳಿತ ಸುಧಾರಿಸಿದ. ಸೈನಿಕ ಸೇವೆ ಸಲ್ಲಿಸುವವರಿಗೆ ಜಹಗೀರುಗಳನ್ನು ನೀಡಿದ. ಪೂರ್ವ ಭಾಗದಲ್ಲಿ ಸ್ಥಾಪಿಸಲ್ಪಟ್ಟ ಹೊಸ ಆಡಳಿತದ ಹೊಣೆ ಹೊರಿಸಿದ. ಈ ಭಾಗಗಳನ್ನು ಥೀಮ್ಸ್ ಎಂದು ಕರೆಯುತ್ತಿದ್ದರು. 678ರಲ್ಲಿ ಹೆರಾಕ್ಲಿಯಸ್‍ನ ಮರಿಮಗ ನಾಲ್ಕನೆಯ ಕಾನ್ ಸ್ಟಂಟೈನ್ (668-685) ಅರಬ್ಬರನ್ನು ಬಡಿದಟ್ಟಿದ. 6ನೆಯ ಧಾರ್ಮಿಕ ಮಹಾಸಭೆ 680-81ರಲ್ಲಿ ನಡೆಯಿತು. ಮಾನೋತಿಯಿಸಮ್ ಪಂಥವನ್ನು ಈ ಸಭೆ ಬಹಿಷ್ಕರಿಸಿತು. ಮುಂದೆ ಸಿಂಹಾಸನಕ್ಕಾಗಿ ಎರಡನೆಯ ಜಸ್ತೀನಿಯನ್ ಕಾಲದಲ್ಲಿ (685-695; 705-711) ನಡೆದ ಹೋರಾಟದಲ್ಲಿ ಹೆರಾಕ್ಲಿಯಸ್ ವಂಶ ಅವನತಿಹೊಂದಿತ್ತು.

ಮೂರನೆಯ ಲಿಯೋ ಚಕ್ರವರ್ತಿ ಶಾಂತಿ ಸ್ಥಾಪನೆ (717-741) ಮಾಡಿ ಸಿರಿಯನ್ ರಾಜವಂಶದ ಆಳ್ವಿಕೆಯನ್ನು ಆರಂಭಿಸಿದ. 717-718ರಲ್ಲಿ ಅರಬ್ಬರ ವಿರುದ್ಧ ನಡೆದ ಸಂಗ್ರಾಮದಲ್ಲಿ ಜಯಗಳಿಸಲು ಈತನೇ ಮುಖ್ಯ ಕಾರಣನಾಗಿ ಹೆಸರುಗಳಿಸಿದ. ಇದರಿಂದ ಕಾನ್ ಸ್ಟಾಂಟಿನೋಪಲ್ ನಗರ ಅರಬ್ಬರ ದಾಳಿಯಿಂದ ಮುಕ್ತವಾಯಿತು. ಈ ಮಹಾಜಯಕ್ಕೆ ಬಲ್ಗಾರ್ ಜನಾಂಗದವರ ನೆರವು ಪ್ರಮುಖವಾಗಿತ್ತು. 751ರಲ್ಲಿ ಲೋಂಬಾರ್ಡ್‍ರಿಗೆ ರವೆನ್ನಾ ಪಟ್ಟಣವನ್ನು ಬಿಟ್ಟುಕೊಡಬೇಕಾಯಿತು. ಮುಂದೆ ರವೆನ್ನಾ ರಾಜ ಪಿಪಿನ್‍ನ ಕೈಸೇರಿ ಮತ್ತೆ ರೋಮಿಗೆ ಸೇರಿತು. ಈ ನಷ್ಟ ಓಮಯದ್‍ರ ಪತನದಿಂದ ತುಂಬಿ ಬಂದಿತು. ಅನಂತರ ಅಬ್ಬಾಸಿದರು ಅರಬ್ಬರ ರಾಜಧಾನಿಯನ್ನು ಬಾಗ್ದಾದ್‍ಗೆ ವರ್ಗಾಯಿಸಿದರು. 787ರಲ್ಲಿ ಏಳನೆಯ ಮಹಾಧರ್ಮ ಸಭೆ ನಿಕಾಯ ಪಟ್ಟಣದಲ್ಲಿ ನಡೆಯಿತು. ರಾಣಿ ಇರೀನ್ ಇವರ ಪ್ರೇರಕ ಶಕ್ತಿಯಾಗಿದ್ದಳು. ಮೂರ್ತಿ ಪೂಜೆ ಮಾಡುವವರನ್ನು ತಿರಸ್ಕರಿಸಲಾಯಿತು. ಮೂರ್ತಿಗಳಿರುವುದು ಧಾರ್ಮಿಕ ಉದ್ದೇಶಕ್ಕೆ ಮಾತ್ರ ಪೂಜೆಗೆ ಅಲ್ಲ ಎಂಬ ಆಜ್ಞೆಯನ್ನು ಈ ಮಹಾಸಭೆ ಹೊರಡಿಸಿತು. ಚಕ್ರವರ್ತಿನಿಯಾಗಿದ್ದ ಇರೀನಳು ತನ್ನ ಮಗ 6ನೆಯ ಕಾನ್‍ಸ್ಟಂಟೈನ್‍ನ (780-797) ಕಣ್ಣು ಕೀಳಿಸಿದಳು. ಅನಂತರ ಅವಳೇ (797-802) ಸ್ವಲ್ಪ ಕಾಲ ಆಳ್ವಿಕೆ ನಡೆಸಿದಳು. ಆದರೆ ಅವಳು ಸಮರ್ಪಕವಾಗಿರಲಿಲ್ಲ. ಮೊದಲನೆಯ ನೈಸ್ ಫೋರಸ್ ಅವಳನ್ನು ಸಿಂಹಾಸನದಿಂದ ತಳ್ಳಿ ಹಾಕಿದ. 811ರಲ್ಲಿ ಇವನು ಬಲ್ಗೇರಿಯನ್ನರ ವಿರುದ್ಧ ಕಾದಾಡುತ್ತಿದ್ದಾಗ ಮರಣ ಹೊಂದಿದ. ಬಲ್ಗೇರಿಯಾದ ರಾಜನಾಗಿದ್ದ ಕ್ರೂಮ್ ಈ ಸಾಮ್ರಾಜ್ಯದ ಪರಮ ಶತ್ರುವಾಗಿದ್ದ. ಈ ಮಧ್ಯೆ 813-842ರ ಅವಧಿಯಲ್ಲಿ ಮತ್ತೆ ಮೂರ್ತಿ ಪೂಜೆ ಆಚರಣೆಗೆ ಬಂದಿತು. ಆದರೆ 843ರಲ್ಲಿ ಅಂತಿಮವಾಗಿ ನಿರ್ಮೂಲನವಾಯಿತು. ಅಮೋರಿಯನ್ ರಾಜಮನೆತನದ ಆಳಿಕ್ವೆಯಲ್ಲಿ (820-827). ಅರಬ್ಬರು ಕ್ರೀಟ್ ದ್ವೀಪವನ್ನೂ ಸಿಸಲಿಯ ಹೆಚ್ಚಿನ ಭಾಗವನ್ನೂ ಗೆದ್ದುಕೊಂಡರು. ಆದರೆ 864ರಲ್ಲಿ ಬಲ್ಗೇರಿಯಾದ ಬೋರಿಸ್ ಜನಾಂಗದವರನ್ನು ಬಿಜಾóನ್‍ಟೀನ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದು ಅದಕ್ಕೆ ದೊರೆತ ಒಂದು ಧಾರ್ಮಿಕ ಸಾಧನೆ ಎನ್ನಬಹುದು. ಇದು ಮುಂದೆ ಸ್ಲಾವಿಕ್ ಜನಾಂಗದವರ ಪ್ರಪಂಚಕ್ಕೂ ಬಿಜಾóನ್ ಟೀನ್ ಧಾರ್ಮಿಕ ಸಂಪ್ರದಾಯದ ಹರಡುವಿಕೆಗೂ ಬೆಳೆವಣಿಗೆಗೂ ಮಾದರಿಯಾಯಿತು.

ಈ ವೇಳೆಗೆ ಮ್ಯಾಸಡೋನಿಯಲ್ ವಂಶ (867-1056) ಅಧಿಕಾರಕ್ಕೆ ಬಂತು. ಈ ವಂಶದ ರಾಜರು ಕಲೆ, ಸಾಹಿತ್ಯ ಮತ್ತು ಸಾಮ್ರಾಜ್ಯದ ಉನ್ನತಿಗೆ ಮಹತ್ತರ ಸೇವೆ ಸಲ್ಲಿಸಿದರು. ಇವರು ಸಾಮ್ರಾಜ್ಯದ ಸೈನ್ಯವನ್ನು ಮತ್ತೆ ರಚಿಸಿದರು. ಎಲ್ಲ ರಂಗಗಳಿಂದಲೂ ಬಿಜಾóನ್ ಟೀನ್‍ನ ಶತ್ರುಗಳನ್ನು ಹಿಮ್ಮೆಟ್ಟಿಸಿದರು. ಪೂರ್ವಭಾಗದಲ್ಲಿದ್ದ ಮುಸ್ಲಿಮರ ಮೇಲೆ ಜಯಗಳಿಸಿದರು. ಜನರಲ್ ನೈಸ್ ಫೋರಸ್ ಫೆಕಾಸ್ (ಚಕ್ರವರ್ತಿ: 963-969), 961ರಲ್ಲಿ ಕ್ರೀಟ್ ದ್ವೀಪವನ್ನೂ 965ರಲ್ಲಿ ಆಂಟಿಯೋಕನ್ನು ಗೆದ್ದುಕೊಂಡು, ಮೆಡಿಟರೇನಿಯನ್ ಪ್ರದೇಶದಿಂದ ಅರಬ್ಬರನ್ನು ಓಡಿಸಿದ. ಎರಡನೆಯ ಬಾಸಿಲ್ (976-1025) ಮ್ಯಾಸಿಡೋನಿಯನ್ ಮನೆತನದ ಬಲು ಪ್ರಖ್ಯಾತನಾದ ದೊರೆ. ಸದಾ ತೊಂದರೆಕೊಡುತ್ತಿದ್ದ ಬಲ್ಗೇರಿಯನ್ ಸಾಮ್ರಾಜ್ಯವನ್ನು (680-1018)ಸಂಪೂರ್ಣವಾಗಿ ನಾಶಮಾಡಿದ. ಇದರಿಂದ ಸಮಗ್ರ ಬಾಲ್ಕನ್ ಪ್ರದೇಶದ ಮೇಲೆ ಬಿಜಾóನ್ ಟೀನ್ ಸಾಮ್ರಾಜ್ಯಕ್ಕೆ ಮೊತ್ತಮೊದಲ ಬಾರಿಗೆ ಹತೋಟಿ ಬಂತು. 1025ರ ವೇಳೆಗೆ ಮ್ಯಾಸಿಡೋನಿಯನ್ನರು ಬಾರಿಯನ್ನು ಪುನಃ ಆಕ್ರಮಿಸಿಕೊಂಡು ದಕ್ಷಿಣ ಇಟಲಿಯ ಮೇಲೆ ಹತೋಟಿ ಸ್ಥಾಪಿಸಿದರು. ಇವರು ಸಾಮ್ರಾಜ್ಯದ ಗಡಿಯನ್ನು ಸಿರಿಯಾದವರೆಗೂ ವಿಸ್ತರಿಸಿದರು. 989ರಲ್ಲಿ ಕೀವ್‍ನ ವ್ಲಾಡಿಮಿರ್ ಬಿಜಾóನ್ ಟೀನ್ ಪ್ರಭಾವಕ್ಕೆ ಒಳಗಾಗುವಂತಾಯಿತು. ಎರಡನೆಯ ಬಾಸಿಲ್ ತನ್ನ ಹಿರಿಯವರಾಗಿದ್ದ ಏಳನೆಯ ಕಾನ್‍ಸ್ಟಂಟೈನ್ ಮತ್ತು ರೋಮನಸ್ ಲೆಕೆಫೇನಸ್ ಅದರಂತೆ ಚಿಕ್ಕ ಭೂಹಿಡುವಳಿದಾರರ ಮತ್ತು ಸೈನಿಕ ಜಹಗೀರುದಾರರ ಹಕ್ಕುಗಳ ರಕ್ಷಣೆಗೋಸ್ಕರ ಯುಕ್ತವಾದ ಶಾಸನಗಳನ್ನು ಮಾಡಿದ. ಬಾಸಿಲ್‍ನ ಉತ್ತರಾಧಿಕಾರಿಗಳು (1025-1081) ಆಡಳಿತದ ಬಗ್ಗೆ ಉದಾಸೀನರಾದ್ದರಿಂದ ಇಂಥ ಕಾನೂನುಗಳು ಉಪಯೋಗವಿಲ್ಲದೆ ಹೋದುವು. ಇದರಿಂದ ದೊಡ್ಡ ದೊಡ್ಡ ಜಮೀನುದಾರರು ತಮ್ಮ ಹಿಡುವಳಿಗಳನ್ನು ಹೆಚ್ಚಿಸಿಕೊಂಡಿದ್ದಲ್ಲದೆ, ಸಂಪೂರ್ಣವಾಗಿ ತೆರಿಗೆಗಳ ಮಾನ್ಯವೂ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆದುಕೊಂಡರು. ಇದರ ಪರಿಣಾಮವಾಗಿ ಸರ್ಕಾರದ ಆದಾಯ ತುಂಬ ಇಳಿಮುಖವಾಗಿ, ಸೈನ್ಯದಲ್ಲಿ ಅಸ್ತವ್ಯಸ್ತ ಉಂಟಾಯಿತು. ಸೈನ್ಯದ ಆಧಾರಸ್ತಂಭದಂತಿದ್ದ ಮಿಲಿಟರಿ ಜಹಗೀರುಗಳು ನಶಿಸಿಹೋಗಿದ್ದು ಬಹಳ ನಷ್ಟವಾಯಿತು. ತರುವಾಯದ ಕಾಲದಲ್ಲಿ ಬಿಜಾóನ್‍ಟೀನ್ ಚಕ್ರವರ್ತಿಗಳು ಹೆಚ್ಚಾಗಿ ಬಾಡಿಗೆ ಬಂಟರನ್ನು ಅವಲಂಬಿಸಬೇಕಾಯಿತು. ಅನೇಕ ವೇಳೆ ಇಂಥವರ ಶಕ್ತಿಗೆ ತಲೆಬಾಗುವ ಪರಿಸ್ಥಿತಿಯೂ ಬಂದೊದಗಿತ್ತು. ಬಾಡಿಗೆಬಂಟರ ಆಸ್ತಿ ಹೆಚ್ಚಿ ಕೇಂದ್ರ ಸರ್ಕಾರಕ್ಕೆ ಸವಾಲಾಗುವ ಸ್ಥಿತಿ ಬಂತು.

ಅನೇಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ ಗ್ರೀಕ್ ಮತ್ತು ರೋಮನ್ ಸಂಪ್ರದಾಯ ಚರ್ಚುಗಳು ಪರಸ್ಪರ ಸಂಬಂಧಗಳನ್ನು ಕಡಿದು ಹಾಕಿಕೊಂಡು (1054) ಆಧಿಕೃತವಾಗಿ ಪರಸ್ಪರ ಟೀಕಿಸತೊಡಗಿದುವು. 1071ರಲ್ಲಿ ನಾಲ್ಕನೆಯ ಡಯೋಜಿನಸ್ ರೋಮನಸ್ ಚಕ್ರವರ್ತಿಯನ್ನು ಆರ್ಮಿನಿಯದ ಮನ್‍ಚಿಕತ್ ರಣರಂಗದಲ್ಲಿ ಸೆಲ್‍ಜುಕ್ ಟರ್ಕರು ಸೆರೆಹಿಡಿದರು. ಈ ಘಟನೆ ಏಷ್ಯ ಮೈನರ್ ಪ್ರದೇಶದ ಮೇಲೆ ಬಿಜಾóನ್‍ಟೀನ್ ಆಡಳಿತ ಕೊನೆಗೊಂಡುದನ್ನು ಸೂಚಿಸುತ್ತದೆ. ಅದೇ ವರ್ಷ ಬಿಜಾóನ್‍ಟೀಯಮ್ ಬಾರಿಯಿಂದ ಕಾಲ್ತೆಗೆಯಬೇಕಾಯಿತು. ಇದು ದಕ್ಷಿಣ ಇಟಲಿಯಲ್ಲಿಯ ಸಾಮ್ರಾಜ್ಯದ ಮುಖ್ಯವಾದ ಆಯಕಟ್ಟಿನ ಸ್ಥಾನವಾಗಿತ್ತು. ನಾರ್ಮನ್, ರಾಬರ್ಟ್ ಗೀಸ್‍ಕಾರ್ಡ್ ಇವನ್ನು ಗೆದ್ದುಕೊಂಡರು. ಮತ್ತೆ ಬಿಜಾóನ್‍ಟೀಯಮ್ ಇಟಲಿಯ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಸಾಧ್ಯವಾಗಲೇ ಇಲ್ಲ.

ಇಟಲಿ, ಗ್ರೀಸ್ ಮತ್ತು ಏಷ್ಯಮೈನೆರ್‍ಗಳಲ್ಲಿ ಪರಾಭವವುಂಟಾದ ಮೇಲೆ ಕೋಮ್‍ನಿಯನ್ ಮನೆತನದ (1801-1185) ಮೊದಲನೆಯ ಅಲೆಕ್ಸಿಯಸ್ ಕೋಮನೇನಸ್‍ನ ಆಳ್ವಿಕೆಯಿಂದ ಒಂದು ಹೊಸ ಯುಗ ಬಿಜಾóನ್‍ಟೀನ್ ಚಕ್ರಾಧಿಪತ್ಯದ ಇತಿಹಾಸದಲ್ಲಿ ಆರಂಭವಾಯಿತು. ಇವನು ಮಿಲಟರಿ ಪಕ್ಷ ಮತ್ತು ಪ್ರಾಂತಗಳಲ್ಲಿದ್ದ ದೊಡ್ಡ ದೊಡ್ಡ ಜಮೀನುದಾರರ ಪರವಾದ ಧೋರಣೆ ಅನುಸರಿಸಿದ. ಅವರಿಗೆ ನಾನಾ ರೀತಿಯ ಸವಲತ್ತುಗಳನ್ನು ಕೊಟ್ಟು ಮನವೊಲಿಸಿಕೊಂಡ. ಸಾಮ್ರಾಜ್ಯದ ಶತ್ರುಗಳನ್ನು ಹತೋಟಿಯಲ್ಲಿಟ್ಟ, ಬಾಲ್ಕನ್ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದ ನಾರ್ಮನ್ನರನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಿದ. ಕ್ರುಸೇಡ್‍ಗಳಿಂದ ಅಥವಾ ಧರ್ಮಯುದ್ಧಗಳಿಂದ ಅನೇಕ ಲಾಭಗಳನ್ನು ಗಳಿಸಿದ. ಇಷ್ಟೆಲ್ಲ ಕೀರ್ತಿಯನ್ನು ಸಂಪಾದಿಸಿದರೂ ತನ್ನ ಕೆಲವು ಪೂರ್ವಿಕ ಚಕ್ರವರ್ತಿಗಳಂತೆ, ಒತ್ತಡದ ಫಲವಾಗಿ ನಾಣ್ಯದ ಬೆಲೆ ಇಳಿವರಿಕೆ ಮಾಡಬೇಕಾಯಿತು. ಸುಮಾರು 800 ವರ್ಷಗಳ ಕಾಲ ಪ್ರಪಂಚದಲ್ಲೇ ಹೆಚ್ಚು ಸಮತೋಲನವುಳ್ಳ ನಾಣ್ಯವೆಂದು ಪರಿಗಣಿಸಲ್ಪಟ್ಟಿದ್ದ ನಾಣ್ಯದ ಬೆಲೆ ಇಳಿಸಿದ್ದು ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿತು. ನಾರ್ಮನ್ನರ ವಿರುದ್ಧ ಹೋರಾಟದಲ್ಲಿ ಬೆಂಬಲ ಗಳಿಸಿಕೊಳ್ಳಲು, ಸಾಮ್ರಾಜ್ಯದ ಮುಖ್ಯ ಆದಾಯದ ಭಾಗವಾಗಿದ್ದ ವೆನಿಸ್ ನಗರಕ್ಕೆ ಹೆಚ್ಚಿನ ರಿಯಾಯಿತಿಗಳನ್ನು ಕೊಡಬೇಕಾಯಿತು. ಇದರಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯಿತು. ಅವನ ಮಗ ಎರಡನೆಯ ಜಾನ್ ಕೊಮ್‍ನೆನಸ್ (1118-43) ವೆನಿಸ್‍ನೊಡನೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿಯಲು ಪ್ರಯತ್ನಿಸಿ ವಿಫಲನಾದ. ಇಂತಹುದೇ ಒಂದು ಒಪ್ಪಂದವನ್ನು ಜಿನೋವಾ ಮತ್ತು ಪೀಸಾನಗರಗಳೊಡನೆಯೂ ಮಾಡಿಕೊಂಡ. ವೆನಿಸಿನಂತೆ ಈ ನಗರಗಳಿಗೂ ಅನೇಕ ಸವಲತ್ತುಗಳು ದೊರೆತುವು. 1137ರಲ್ಲಿ ಕೆಳಗಿನ ಆರ್ಮೇನಿಯಾವನ್ನು ವಶಪಡಿಸಿಕೊಂಡ. ಪೂರ್ವದ ಗಡಿಯನ್ನು ಭದ್ರಪಡಿಸಿದ, ಜಾನನ ಮಗ ಮ್ಯಾನ್ಯೂಯಲ್‍ನನ್ನು (1143-80) ನೆಲಜುಕ್ ಟರ್ಕರು 1176ರಲ್ಲಿ ಯುದ್ಧದಲ್ಲಿ ಸೋಲಿಸಿದರು.

ಕೋಮಲ್‍ನೇಸಿಯನ್ ಮನೆತನದ ಚಕ್ರವರ್ತಿಗಳಲ್ಲಿ ಕೊನೆಯವನಾಗಿದ್ದ ಅಂಡ್ರೋನಿಕಸ್ (1183-85) ಸುಧಾರಣೆಗಳನ್ನು ತರುವುದರಲ್ಲಿ ವಿಫಲನಾದ. ಅಧಿಕಾರ ಅಂಜೆಲಿ ಮನೆತನಕ್ಕೆ (1185-1204) ಹೋಯಿತು. ಇವರು ನಾಲ್ಕನೆಯ ಕ್ರೂಸೇಡ್ ಯುದ್ಧದ (1204) ಲ್ಯಾಟಿನ್ ಜನಾಂಗದವರಿಂದ ಕಾನ್‍ಸ್ಟಾಂಟಿನೋಪಲ್ ನಗರದ ಮೇಲೆ ನಡೆದ ಮುತ್ತಿಗೆ ಮತ್ತು ಲೂಟಿ ತಡಿಗಟ್ಟುವುದರಲ್ಲಿ ವಿಫಲರಾದರು. ಧರ್ಮ ಯುದ್ಧದಲ್ಲಿ ಭಾಗವಹಿಸಿದವರು ಕ್ರಮಬದ್ಧವಾಗಿ ಈ ನಗರವನ್ನು ಕೊಳ್ಳೆಹೊಡೆದು ಪಶ್ಚಿಮ ಯೂರೊಪಿನ ತಮ್ಮ ಚರ್ಚು, ಅರಮನೆ, ಬಂಗಲೆಗಳನ್ನು ಶ್ರೀಮಂತಗೊಳಿಸಿದರು. ಸಾಮ್ರಾಜ್ಯ ಅನೇಕ ಭಾಗಗಳಾಗಿ ಒಡೆದು ಹೋಯಿತು. ಅದರಲ್ಲಿ ದೊಡ್ಡಭಾಗ ವೆನಿಸಿಗೆ ಸೇರಿತು. ಮುಂದೆ ಗ್ರೀಕರು, ಲ್ಯಾಟಿನ್ನರು, ಬಲ್ಗೇರಿಯನ್ನರು, ಟರ್ಕರು ಮತ್ತು ಮಂಗೋಲಿಯನ್ನರು ಪರಸ್ಪರ ಕಾದಾಡುತ್ತಿದ್ದರು. ಇವರೆಲ್ಲರ ದಾಳಿಯನ್ನು ಬಿಜಾóನ್‍ಟಿಯನ್ ಸಾಮ್ರಾಜ್ಯ ಸಹಿಸಿಕೊಳ್ಳಬೇಕಾಯಿತು. ಜಿನೋವಾ ಮತ್ತು ವೆನಿಸುಗಳ ಲಾಭದಾಯಕ ವ್ಯಾಪಾರ ಸಾಮ್ರಾಜ್ಯದ ಕೈಬಿಟ್ಟು ಹೋದದ್ದರಿಂದ ಅನೇಕ ತೊಂದರೆಗಳುಂಟಾದವು. ಇವಲ್ಲದೆ ಚಕ್ರಾಧಿಪತ್ಯದ ವಿಸ್ತಾರದಲ್ಲಿ ಕುಗ್ಗಿತು. ಕಾನ್‍ಸ್ಟಾಂಟಿನೋಪಲ್ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶ ಮಾತ್ರ ಈಗ ಅವರ ವಶದಲ್ಲಿದ್ದಿತು. ಮೂರು ಕೋಟೆಗಳಾದ ಮೋಸೆಂಬಾಸಿಯಾ, ಮೈವಾ ಮತ್ತು ವಿಸ್ಗ್ರಗಳೂ ಅದರ ವಶದಲ್ಲಿದ್ದವು. ಪ್ಯಾಲಿಯೋಲೊಗಸ್ ಮನೆತನದ (1259-82) ಸ್ಥಾಪಕ ಎಂಟನೆಯ ಮೈಕೆ ಲನು ಲ್ಯಾಟಿನ್ನರನ್ನು ಕಾನ್‍ಸ್ಟಾಂಟಿನೋಪಲ್ ನಿಂದ ಹಿಮ್ಮೆಟ್ಟಿಸಿದ. ಎಂಟನೆಯ ಮೈಕೇಲ್ ಪ್ರಬಲನಾದ ಬುದ್ಧಿವಂತ ಅರಸನಾಗಿದ್ದ. ರೋಮನ್ ಚರ್ಚಿನೊಡನೆ ಸೇರಲು ಮೈಕೇಲ್ ಮಾಡಿದ ವ್ಯವಸ್ಥೆ ನಿರೀಕ್ಷಿತ ಪ್ರತಿಫಲ ನೀಡಲಿಲ್ಲ. ತನ್ನ ವಿರುದ್ಧ ಆಂಜೋವಿನ ಚಾಲ್ರ್ಸ್ ಹೂಡಿದ್ದ ಪಶ್ಚಿಮ ರಾಷ್ಟ್ರಗಳ ಮತ್ತು ಬಾಲ್ಕನ್ ರಾಷ್ಟ್ರಗಳ ಒಕ್ಕೂಟವನ್ನು ಮೈಕೇಲ್ ಎದುರಿಸಿದ. ಪೂರ್ವದ ಗಡಿಯಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡ. 
ಎರಡನೆಯ ಆಂಡ್ರೋನಿಕಸ್ ಮೈಕೇಲನ ಮಗ (1282-1328). ಇವನ ಕಾಲದಲ್ಲಿ ಅಂತರ್ಯುದ್ಧಗಳು ನಡೆದು ಬಿಜಾóನ್ ಟೀಯನ್ ಸಾಮ್ರಾಜ್ಯದ ಶಕ್ತಿಗುಂದಿತು. 5ನೆಯ ಜಾನನ (1341-91), ಕಾಲದಲ್ಲಿ ಜಿನೋವಾ, ವೆನಿಸ್ ಮತ್ತು ಸರ್ಬಿಯನ್ನರು ತೊಂದರೆಕೊಟ್ಟರು. ಐರ್ಕರು ದಾಳಿ ಮಾಡಿದರು. ಜಾರ್ ಸ್ಟೀಫನ್ ದೂಷನ್ನನು ಗ್ರೀಕೊ-ಸರ್ಬಿಯನ್ ಸಾಮ್ರಾಜ್ಯ ಕಟ್ಟುವ ಕನಸು ಕಂಡ. ಸರ್ಬಿಯನ್ ಮನೆತನದ ಆಳ್ವಿಕೆಯನ್ನು ಸ್ಥಾಪಿಸುವ ಪ್ರಯತ್ನ ಮಾಡಿದ. ಆದರೆ ಇವನು ಅಕಾಲದಲ್ಲಿ ಮರಣಹೊಂದಿದ್ದರಿಂದ ಈ ಆಸೆ ಕೈಗೂಡಲಿಲ್ಲ. 13ನೆಯ ಶತಮಾನದ ಕಡೆಯಲ್ಲಿ ಓಟೋಮನ್ ಟರ್ಕರು ಬಿಜಾóನ್‍ಟೀನ್ ಸಾಮ್ರಾಜ್ಯವನ್ನು ಕೆಣಕಲು ಆರಂಭಿಸಿದರು. 1341ರ ವೇಳೆಗೆ ಅವರು ಏಷ್ಯ ಮೈನರ್ ಪ್ರದೇಶವನ್ನು ಸಂಪೂರ್ಣವಾಗಿ ತಮ್ಮ ವಶಮಾಡಿಕೊಂಡರು. 1354ರ ವೇಳೆಗೆ ಯೂರೊಪಿನ ಕ್ಯಾಲಿಫೋರ್ನಿಯದಲ್ಲಿ ನೆಲಸಿದರು. ಮೊದಲನೆಯ ಮುರಾದನು (1359-89) ಓಟ್ಟೋಮನ್ ಸಾಮ್ರಾಜ್ಯದ ರಾಜಧಾನಿಯನ್ನು ಏಡ್ರಿಯನೋಪಲ್ ಪಟ್ಟಣಕ್ಕೆ 1365ರಲ್ಲಿ ವರ್ಗಾಯಿಸಿದ. ಇದು ಸರ್ಬಿಯನ್ನರ ಮತ್ತು ಬಲ್ಗೇರಿಯನ್ನರ ಮೇಲಿನ ಯುದ್ಧಗಳಿಗೆ ಟರ್ಕರ ನೆಲೆಯಾಯಿತು. ಎರಡನೆಯ ಮ್ಯಾನ್ಯುಯಲ್ (1391-1425); ಯೂರೊಪಿನ ನೆರವನ್ನು ಪಡೆದುಕೊಳ್ಳುವುದರಲ್ಲಿ ವಿಫಲನಾದ. ಮಂಗೋಲರ ನಾಯಕ ತೈಮೂರ್ ಟರ್ಕರನ್ನು ಆಡಗಿಸಿದ್ದರಿಂದ ಬಿಜಾóನ್‍ಟೀನ್ ಸಾಮ್ರಾಜ್ಯ 50 ವರ್ಷ ಹೆಚ್ಚಾಗಿ ಬಾಳಿತು. ಕೊನೆಗೆ ಎರಡನೆ ಮಹಮದ್ 1453 ಮೇ 29ರಂದು ಕಾನ್‍ಸ್ಟಾಂಟಿನೋಪಲ್ ನಗರವನ್ನು ಮುತ್ತಿ ಬಿಜಾóನ್‍ಟೀನ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ 11ನೆಯ ಕಾನ್ ಸ್ಟಂಟೈನ್‍ನನ್ನು ರಣರಂಗದಲ್ಲಿ ಕೊಂದು ಹಾಕಿದ. 

	ಬಿಜಾóನ್‍ಟೀಯನ್ ಸರ್ಕಾರ ತನ್ನದೇ ಆದ ಕೆಲವು ವಿಶಿಷ್ಟತೆಯನ್ನು ಪಡೆದಿತ್ತು. ಚಕ್ರವರ್ತಿ ಸರ್ವಾಧಿಕಾರಿಯಂತೆ ಆಳುತ್ತಿದ್ದ. ರಾಜಾಧಿಕಾರದ ಮುಖ್ಯಾಂಶಗಳು ಈ ಸಾಮ್ರಾಜ್ಯದ ಇತಿಹಾಸದಲ್ಲಿ ಎಲ್ಲ ಕಾಲದಲ್ಲೂ ಇದ್ದುವು. ಚಕ್ರವರ್ತಿಯ ಅಧಿಕಾರವನ್ನು ಮೊಟಕುಗೊಳಿಸುವಂಥ ಹೆಚ್ಚು ಘಟನೆಗಳು ಸಂಭವಿಸಲ್ಲಿಲ್ಲ. ಗಣರಾಜ್ಯ ಪ್ರಭುತ್ವದತ್ತ ವಿಕಾಸ ನಡೆಯಲಿಲ್ಲ. ನಡೆದ ದಂಗೆಗಳು, ಚಿತಾವಣೆಗಳು ಕೇವಲ ಚಕ್ರವರ್ತಿಗಳತ್ತ ನಡೆದ ವೈಯಕ್ತಿಕ ಘಟನೆಗಳಾಗಿದ್ದವು. ಚಕ್ರವರ್ತಿಗಳು ಕೋಮಿನ ಸಂಪ್ರದಾಯವನ್ನು ಅನುಸರಿಸಿ ಸಾಮಾನ್ಯವಾಗಿ ಒಳ್ಳೆಯ ಆಡಳಿತವನ್ನು ನೀಡಲು ಪ್ರಯತ್ನಿಸಿದರು. ಸೆನೆಟ್‍ನಿಂದ ನೇಮಕ ಮಾಡಲ್ಪಟ್ಟ ಚಕ್ರವರ್ತಿ, ಜನರ ಮತ್ತು ಸೇನೆಯ ಒಪ್ಪಿಗೆಯನ್ನು ಪಡೆಯಬೇಕಾಗಿದ್ದಿತು. ಇದೊಂದು ಸಂಪ್ರದಾಯವಾಗಿತ್ತು. ಉತ್ತರಾಧಿಕಾರ ಸಹಜವಾಗಿರಲಿಲ್ಲ. ರಾಜನ ಆಯ್ಕೆಯಲ್ಲಿ ಧರ್ಮದ ಮುಖಂಡರ ಪಾತ್ರ ಹಿರಿದಾಗಿತ್ತು. ಕ್ರೈಸ್ತ ಧರ್ಮವನ್ನು ರಕ್ಷಿಸುತ್ತೇನೆಂದು ಚಕ್ರವರ್ತಿ ಸಿಂಹಾಸನಾರೋಹಣ ಕಾಲದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಬೇಕಾಗಿದ್ದಿತು. ಚಕ್ರವರ್ತಿಯಾದವನು ಮತ್ತೊಂದು ರಾಜ್ಯಕ್ಕೆ ತಮ್ಮ ಪ್ರದೇಶವನ್ನು ಬಿಟ್ಟುಕೊಡಲು ಅಧಿಕಾರವಿರಲ್ಲಿಲ್ಲ. ಸರ್ಕಾರದಲ್ಲಿ ಸೆನೆಟ್ ಶಾಸನ ಮಾಡುವ ಮತ್ತು ನ್ಯಾಯಾಡಳಿತ ಹಕ್ಕು ಇರಲಿಲ್ಲ. ಅದು ರಾಜಕೀಯ ಅಪರಾಧಗಳ ಬಗ್ಗೆ ವಿಚಾರಣೆ ಮಾಡಿ ಶಿಕ್ಷೆ ನೀಡುವ ಅಧಿಕಾರ ಇತ್ತು. ಶ್ರೀಮಂತರು ಉನ್ನತ ಅಧಿಕಾರಿಗಳು ಸೆನೆಟ್‍ನ ಸದಸ್ಯರಾಗಿದ್ದರು. ಹತ್ತನೆಯ ಶತಮಾನದಲ್ಲಿ ಸೆನೆಟ್‍ನ ಅಧಿಕಾರ ಕುಂದಿತು. ಪ್ರಜೆಗಳು ವಿಶೇಷವಾದ ಸಮಾರಂಭಗಳಲ್ಲಿ ಭಾಗವಹಿಸುವ ಸಂಪ್ರದಾಯ ಬೆಳೆದುಬಂದಿತು. ಧಾರ್ಮಿಕ ಮೆರವಣಿಗೆಗಳು, ಆಸ್ಥಾನದಲ್ಲಿ ನಡೆಯುವ ಮುಖ್ಯ ಸಮಾರಂಭಗಳು, ಸಂಪ್ರದಾಯಗಳು, ಚಕ್ರವರ್ತಿ ಇತರರಿಗೆ ತನ್ನ ದರ್ಪ ಪ್ರತಿಷ್ಠೆಗಳನ್ನು ತೋರಿಸಿಕೊಳ್ಳುವ ಸಾಧನಗಳಾಗಿದ್ದುವು. ಬಿಜಾóಂಟೀನ್ ಸರ್ಕಾರದಲ್ಲಿ ಒಬ್ಬನಿಗಿಂತ ಹೆಚ್ಚು ಮಂದಿ ಚಕ್ರವರ್ತಿಗಳು ಇರಬಹುದಾಗಿದ್ದಿತು. ಚಕ್ರವರ್ತಿ ಬಾಲಕನಾಗಿದ್ದರೆ, ಮಹಾದಂಡನಾಯಕ ಆಳುವ ಸಂಪ್ರದಾಯವಿದ್ದಿತು. ಆದರೆ ನಿಜವಾದ ಚಕ್ರವರ್ತಿಗೇ ಸಂಪೂರ್ಣ ಅಧಿಕಾರವಿತ್ತು. ಮೂರನೆಯ ಲಿಯೋ, ಮೊದಲನೆಯ ಜಸ್ತೀ ನಿಯನ್ ಮತ್ತು ಒಂದನೆಯ ಬಾಸಿಲ್ ಮತ್ತು 6ನೆಯ ಲಿಯೋ ಚಕ್ರವರ್ತಿಗಳು ಶಾಸನ ಮತ್ತು ಕಾನೂನಿನ ಇತಿಹಾಸದಲ್ಲಿ ಪ್ರಖ್ಯಾತರಾಗಿದ್ದಾರೆ. ಇವರು ಕಾನೂನುಗಳನ್ನು ಕ್ರೋಢೀಕರಿಸಿದರು. ಕುಟುಂಬ ವ್ಯವಸ್ಥೆ, ವಿವಾಹ, ಆಸ್ತಿ, ಅಪರಾಧ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ರಚಿಸಲಾಯಿತು. ಯಾವ ಅಪರಾಧಕ್ಕೆ ಯಾವ ಶಿಕ್ಷೆ ನೀಡಬೇಕೆಂದು ಈ ದಂಡಸಂಹಿತೆಗಳಲ್ಲಿ ಉಲ್ಲೇಖಿಸಲಾಯಿತು. ಈ ಚಕ್ರವರ್ತಿಗಳು ಮಾಡಿದ ಕಾನೂನುಗಳಲ್ಲಿ ಅನೇಕ ವೇಳೆ ಪರಸ್ಪರ ಭಿನ್ನಾಭಿಪ್ರಾಯವಿದ್ದುದನ್ನು ನೋಡಬಹುದು. ಉದಾಹರಣೆಗೆ ಜಸ್ತೀನಿಯನ್ ವಿವಾಹವನ್ನು ಒಂದು ಒಪ್ಪಂದವೆಂದು ಪರಿಗಣಿಸಿ ಅದನ್ನು ಎರಡೂ ಪಕ್ಷದ ಒಪ್ಪಿಗೆಯ ಮೇರೆಗೆ ಮುರಿಯಬಹುದೆಂದು ಹೇಳಿದರೆ, ಮೂರನೆಯ ಲಿಯೋ ವಿವಾಹ ಮುರಿಯಲಾಗದ ದೈವಿಕ ಸಂಬಂಧ ಎಂದು ಚರ್ಚಿನ ಅಭಿಪ್ರಾಯಕ್ಕೆ ಕಾನೂನು ಬೆಂಬಲ ನೀಡಿದ. ವೇಶ್ಯಾವೃತ್ತಿಯನ್ನು ರದ್ದುಗೊಳಿಸಲಾಯಿತು. ಮರಣದಂಡನೆಯನ್ನು ಉಳಿಸಿಕೊಳ್ಳಲಾಯಿತು. ಕೆಲವು ಅಪರಾಧ ಮಾಡಿದವರಿಗೆ ಮೂಗು ಮತ್ತು ಕೈಯನ್ನು ಕತ್ತರಿಸಲಾಗುತಿತ್ತು. ಅಪರಾಧ ಕಾನೂನಿನ ಮೇಲೆ ಚರ್ಚಿನ ಪ್ರಭಾವವಿದ್ದಿತು. 

	ಬಿಜಾóನ್‍ಟೀಯನ್ ಸಾಮ್ರಾಜ್ಯದ ಆಡಳಿತ ಕ್ರಮ ರೋಮನ್ ಸಂಪ್ರದಾಯಕ್ಕೆ ಸೇರಿದ್ದರೂ ಕಾಲಾನುಕ್ರಮದಲ್ಲಿ ಅನೇಕ ಬದಲಾವಣೆಗಳುಂಟಾದವು. ಅಧಿಕಾರಿಗಳ ಸಂಖ್ಯೆ ಹೆಚ್ಚಿನದುದು. ಹೊಸ ಹೊಸ ವಿಭಾಗಗಳ ಸ್ಥಾಪನೆ, ಅವರ ಅಧಿಕಾರಗಳ ವ್ಯಾಪ್ತಿ, ಹೆಸರಿನಲ್ಲಿ ಬದಲಾವಣೆ ಇವೆಲ್ಲ ಕೆಲವು ಬೆಳವಣಿಗೆಗಳಾಗಿದ್ದುವು. ನಗರ ಆಡಳಿತ ಸುವ್ಯವಸ್ಥಿತವಾಗಿತ್ತು. ಪೊಲೀಸ್ ವ್ಯವಸ್ಥೆಯಿತ್ತು. ಸಾಮ್ರಾಜ್ಯದ ಕೆಲವು ಭಾಗಗಳಲ್ಲಿ ಥೀಮ್ಸ್‍ಗಳೆಂಬ ಮಿಲಿಟರಿ ಪ್ರಾಂತ್ಯಗಳಿದ್ದವು. ರಕ್ಷಣೆಯ ದೃಷ್ಟಿಯಿಂದ ಇವು ಅವಶ್ಯಕವಾಗಿದ್ದವು. ಈ ಪ್ರಾಂತಗಳ ಗವರ್ನರುಗಳು ಮಿಲಿಟರಿ ಹಾಗೂ ನಾಗರಿಕ ಆಡಳಿತಗಳನ್ನು ನೋಡಿಕೊಳ್ಳುತ್ತಿದ್ದರು. ಸಾಮ್ರಾಜ್ಯದಲ್ಲಿ ವಿವಿಧ ದರ್ಜೆಯ ನ್ಯಾಯಾಲಯಗಳಿದ್ದವು. ಅಂತಿಮವಾದ ಅಪೀಲು ಚಕ್ರವರ್ತಿಗೆ ಹೋಗುತ್ತಿತ್ತು. ಕಾನ್‍ಸ್ಟಾಂಟಿನೋಪಲ್ ನಗರದಲ್ಲಿ 12ನೆಯ ಶತಮಾನದಲ್ಲಿ 4 ಇಂಪೀರಿಯಲ್ ನ್ಯಾಯಲಯಗಳಿದ್ದವು. ನ್ಯಾಯಾಡಳಿತದಲ್ಲಿ ಚರ್ಚಿನ ಪ್ರಭಾವ ಹೆಚ್ಚಾಗಿದ್ದಿತು. ಧಾರ್ಮಿಕ ನ್ಯಾಯಾಲಯಗಳಿದ್ದುವು. ಸರ್ಕಾರ-ಚರ್ಚುಗಳ ನಡುವೆ ಬಾಂಧವ್ಯ ಕೊನೆಯವರೆಗಿತ್ತು. 

ಭೂಕಂದಾಯ ಸಾಮ್ರಾಜ್ಯದ ಮುಖ್ಯ ಆದಾಯವಾಗಿದ್ದಿತು. ಕಂದಾಯವನ್ನು ನಿಗದಿ ಮಾಡುವಾಗ, ಭೂಮಿಯ ಸಾರ, ಉತ್ಪನ್ನ, ಹೂಡಿದ ಬಂಡವಾಳ ಮೊದಲಾದವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ನಗರದ ಜನರ ಮೇಲೆ ನೇರವಾದ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ಆಮದು-ರಫ್ತು ಸುಂಕದಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿತ್ತು. ಭೂಮಿಯ ಒಡೆತನಕ್ಕೆ ಮಾನ್ಯತೆಯಿತ್ತು. ಮಿಲಿಟರಿ ಸೇವೆಗಾಗಿ ಸರ್ಕಾರ ಜಹಗೀರುಗಳನ್ನು ನೀಡುತ್ತಿತ್ತು. ಕ್ರೈಸ್ತ ಮಠಗಳಿಗೂ ದಾನದತ್ತಿಗಳನ್ನು ನೀಡಲಾಗುತ್ತಿತ್ತು.

ಬಿಜಾóನ್‍ಟೀನ್ ಸೈನ್ಯ ಶಿಸ್ತಿಗೆ ಹೆಸರಾಗಿತ್ತು. ಸಮರ ವಿಜ್ಞಾನದ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿತ್ತು. ದೇಹದ ಜೊತೆಗೆ ಬುದ್ಧಿಯ ಉಪಯೋಗ ಮುಖ್ಯ ಎಂಬುದು ಅಂದಿನ ಅಭಿಪ್ರಾಯ. ನೌಕಾದಳದ ಆಡಳಿತಕ್ಕೂ ಗಮನ ಕೊಡಲಾಯಿತು. ವಿದೇಶ ವ್ಯವಹಾರ ಬಿಜಾóನ್‍ಟೀನ್ ಸರ್ಕಾರದ ಒಂದು ಪ್ರಮುಖ ಸಾಧನ. ಅನಾಗರಿಕ ಜನಾಂಗದವರೊಡನೆ ಮದುವೆ ಮಾಡಿಕೊಳ್ಳುವುದರ ಮೂಲಕ ಅವರ ಮೇಲೆ ಪ್ರಭಾವ ಬೀರುವ ತಂತ್ರವನ್ನು ಬಳಸಲಾಯಿತು. ರಾಜತಂತ್ರದ ಸೂತ್ರಗಳನ್ನು ರಚಿಸಲಾಯಿತು.

ಸಾಮ್ರಾಜ್ಯದಲ್ಲಿ ಚರ್ಚು ಬಹುಮುಖ್ಯ ಸಂಸ್ಥೆಯಾಗಿತ್ತು. ಚಕ್ರವರ್ತಿಗಳು ಅದಕ್ಕೆ ತಲೆಬಾಗಬೇಕಾಗಿತ್ತು. ಸಾಮಾನ್ಯವಾಗಿ ಚಕ್ರವರ್ತಿ ಚರ್ಚಿನ ರಕ್ಷಕನಾಗಿದ್ದು. ಅದರ ಸಂಪ್ರದಾಯವನ್ನು ಎತ್ತಿ ಹಿಡಿಯುತ್ತಿದ್ದ. ಚರ್ಚು ಮತ್ತು ಸರ್ಕಾರದ ನಡುವೆ ಸ್ಪರ್ಧೆಯಿರದೆ ಸಾಮರಸ್ಯವಿದ್ದಿತು. ಚರ್ಚಿನ ಆಡಳಿತದಲ್ಲಿ ಡಯೋನೀಸ್‍ಗಳೆಂಬ ವಿಭಾಗಗಳೂ ಪೇಟ್ರಿಯಾಕ್‍ಗಳೆಂಬ ಅಧಿಕಾರ ವರ್ಗಗಳೂ ಇದ್ದುವು. ರೋಮನ್ ಮತ್ತು ಗ್ರೀಕ್ ಸಂಪ್ರದಾಯದ ಚರ್ಚುಗಳನ್ನು ಒಂದು ಗೂಡಿಸುವ ಪ್ರಯತ್ನಗಳು ವಿಫಲವಾದುವು. ಲ್ಯಾಟಿನ್‍ಗಿಂತ ಗ್ರೀಕ್ ಭಾಷೆಯನ್ನು ಚರ್ಚಿನ ವ್ಯವಹಾರಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಕಾನ್‍ಸ್ಟಾಂಟಿನೋಪಲ್ ನಗರದ ಪೇಟ್ರಿಯಾರ್ಕ್ ಬಿಜಾóನ್ ಟೀನ್ ಚರ್ಚಿನ ಮುಖಂಡನಾಗಿದ್ದ. ಚರ್ಚಿನ ಮುಖ್ಯಸ್ಥನಾಗಿ ಕಿರೀಟಧಾರಣೆ ಮಾಡುವ ಅಧಿಕಾರ ಅವನಿಗಿತ್ತು. ಆತನ ಪ್ರಭಾವ ಅಧಿಕವಾಗಿದ್ದು ಚಕ್ರವರ್ತಿಗೇ ಬೇಕಾದರೆ ಬಹಿಷ್ಕಾರ ಹಾಕಬಹುದಾಗಿತ್ತು. ನಾಲ್ಕನೆಯ ಮದುವೆ ಮಾಡಿಕೊಂಡಿದ್ದರಿಂದ 6ನೆಯ ಲಿಯೋ ಚಕ್ರವರ್ತಿಯನ್ನು ಬಹಿಷ್ಕರಿಸಲಾಯಿತು. ಸಂಪ್ರದಾಯ ಶಿಸ್ತುಗಳನ್ನು ಕಾಪಾಡಿಕೊಂಡು ಬರುವುದು ಪೇಟ್ರಿಯಾಕ್‍ನ ಕರ್ತವ್ಯವಾಗಿದ್ದಿತು. ದಾನ ದತ್ತಿಗಳ ಮೂಲಕ ಚರ್ಚಿಗೆ ಹೆಚ್ಚಿನ ಜಮೀನು ಸೇರಿದ್ದಿತು. ಚರ್ಚಿನ ಕೆಲಸಕ್ಕೆ ಅನೇಕ ದರ್ಜೆಯ ಪುರೋಹಿತ ವರ್ಗದವರನ್ನು ನೇಮಿಸಲಾಗಿತ್ತು.

ಬಿಜಾóನ್‍ಟೀನ್ ಸಮಾಜ ವೈವಿಧ್ಯಮಯವಾದ್ದದ್ದು. ಕ್ರಿಶ್ಚಿಯನ್ ಸಾಮ್ರಾಜ್ಯದ ಚೌಕಟ್ಟು ಎಲ್ಲ ಜನಾಂಗದವರನ್ನು ಬಂಧಿಸಿರುವ ಶಕ್ತಿಯಾಗಿದ್ದಿತು. ಗ್ರೀಕೋ-ರೋಮನ್ ಪರಂಪರೆಯ ಮೇಲೆ ಸಮಾಜದ ರಚನೆ ರೂಪಗೊಂಡಿದ್ದಿತು. ಏಷ್ಯದ ಸಂಸ್ಕøತಿಗಳ ಪ್ರಭಾವವನ್ನು ಈ ಸಮಾಜದ ಮೇಲೆ ಗುರುತಿಸಬಹುದು. ಕಾನ್‍ಸ್ಟಾಂಟಿನೋಪಲ್ ನಗರ ಆಯಕಟ್ಟಿನ ಸ್ಥಳದಲ್ಲಿ ಇದ್ದುದರಿಂದ ಅದು ಪ್ರಪಂಚದ ವ್ಯಾಪಾರದ ಕೇಂದ್ರವಾಗಿತ್ತು. ಬಿಜಾóನ್‍ಟೀನ್ ನಾಣ್ಯ ಅಂತರ ರಾಷ್ಟ್ರೀಯ ನಾಣ್ಯವಾಗಿತ್ತು. ಸಾಮ್ರಾಜ್ಯದ ಐಶ್ವರ್ಯ, ಪ್ರಭಾವ ಹೆಚ್ಚಿತ್ತು. ಕಲೆ, ಸಾಹಿತ್ಯ, ವಿದ್ಯಾಭ್ಯಾಸಗಳು ಶ್ರೀಮಂತ ವರ್ಗದವರಿಂದ ಪೋಷಿಸಲ್ಪಟ್ಟಿತ್ತು. ಬಿಜಾóನ್‍ಟೀನ್ ಪಂಡಿತರು ಗ್ರೀಕ್ ಸಾಹಿತ್ಯವನ್ನು ಕಾಪಾಡಿಕೊಂಡು ಬಂದರು. ಮುಂದೆ ಇವರೇ ಯೂರೊಪಿನ ಪುನರುಜ್ಜೀವನಕ್ಕೆ (15ನೇ ಶತಮಾನ) ತಳಹದಿ ಹಾಕಿದರು. ಬಿಜಾóನ್‍ಟೀನ್ ಆಡಳಿತದ ಸಂಪ್ರದಾಯಗಳು ಮುಂದೆ ಯೂರೊಪಿನ ಅನೇಕ ಜನಾಂಗದವರಿಗೆ ಮಾದರಿ ಆದವು. ಎಲ್ಲಕ್ಕಿಂತ ಮಿಗಿಲಾಗಿ ಈ ಚಕ್ರಾಧಿಪತ್ಯ ಮಧ್ಯಕಾಲೀನ ಯುಗದಲ್ಲಿ ಮುಸ್ಲಿಮರ ದಾಳಿಯಿಂದ ಗ್ರೀಕೋ-ರೋಮನ್ ಸಂಸ್ಕøತಿಯನ್ನು ಸಂರಕ್ಷಿಸಿತು.										
  (ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ